ಭಾಸ
	ಪ್ರಸಿದ್ಧ ಸಂಸ್ಕøತ ನಾಟಕಕಾರ. ಸಂಸ್ಕøತ ಸಾಹಿತ್ಯವನ್ನು ತನ್ನ ನಾಟಕಗಳಿಂದ ಶ್ರೀಮಂತಗೊಳಿಸಿ, ಕಾಳಿದಾಸ, ಬಾಣ ಮುಂತಾದ ಮಹಾಕವಿಗಳಿಂದಲೇ ಗೌರವ ಗಳಿಸಿದ.

	ಭಾಸನ ಕಾಲದೇಶ ಕೃತಿಗಳ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕಾಲದ ಚರ್ಚೆಯಂತೂ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ.4ನೆಯ ಶತಮಾನದ ತನಕ ಚಾಚಿಕೊಂಡಿದೆ. ಈತ ವ್ಯಾಸ ವಾಲ್ಮೀಕಿಗಳಿಗಿಂತ ಈಚಿನವನೆಂಬುದರಲ್ಲೂ ಕಾಳಿದಾಸ ಬಾಣರಿಗಿಂತ ಹಿಂದಿನವನೆಂಬುದರಲ್ಲೂ ಸಂದೇಹವಿಲ್ಲ. ಆದರೆ ವ್ಯಾಸ, ವಾಲ್ಮೀಕಿ, ಕಾಳಿದಾಸ ಇವರಲ್ಲಿ ಯಾರೊಬ್ಬರ ಕಾಲವೂ ಖಚಿತವಾಗಿ ತಿಳಿದಿಲ್ಲ. ಬಾಣನ ಕಾಲ ಮಾತ್ರ ಕ್ರಿ.ಶ. 6ನೆಯ ಶತಮಾನವೆಂಬುದರಲ್ಲಿ ವಿವಾದವಿಲ್ಲವಾದ್ದರಿಂದ ಭಾಸ ಅದಕ್ಕೆ ಹಿಂದಿನವನೆಂಬುದು ಸ್ಪಷ್ಟ. ಕಾಳಿದಾಸ ಕ್ರಿ.ಪೂ. 1ನೆಯ ಶತಮಾನದವನೆಂದು ಒಪ್ಪುವುದಾದರೆ ಭಾಸ ಕ್ರಿ.ಪೂ. 3-4ನೆಯ ಶತಮಾನದವನಾಗಿರಬೇಕು. ಕೀತ್‍ರವರ ಅಭಿಪ್ರಾಯದಲ್ಲಿ ಕಾಳಿದಾಸ ಕ್ರಿ.ಶ. 4ನೆಯ ಶತಮಾನದವ; ಭಾಸ ಕ್ರಿ.ಶ. 3ನೆಯ ಶತಮಾನದವ. ಭಾಸ ಉತ್ತರ ಭಾರತದವನೇ, ದಕ್ಷಿಣ ಭಾರತದವನೇ ಎಂಬುದರಲ್ಲೂ ಸಂದೇಹವಿದೆ. ಇವನು ತನ್ನ ನಾಟಕಗಳಲ್ಲಿ ಪ್ರಯೋಗಿಸಿರುವ ಸಂಬಂಧ ಮುಂತಾದ ಪದಗಳ ಮತ್ತು ವ್ಯವಹಾರಗಳ ಕಾರಣದಿಂದಲೂ ಇವನ ನಾಟಕಗಳು ಮೊದಮೊದಲು ಕೇರಳದಲ್ಲಿ ದೊರೆತುದರಿಂದಲೂ ಇವನು ಕೇರಳ ದೇಶದವನೆಂದೇ ವಾದಿಸುವವರಿದ್ದಾರೆ. ಇವನ ನಾಟಕಗಳಲ್ಲಿ ಬರುವ ನದಿಗಳೂ ಪಟ್ಟಣಗಳೂ ಉತ್ತರ ಭಾರತದವೇ ಆದುದರಿಂದಲೂ ಇವನು ದಕ್ಷಿಣ ಭಾರತದವನಲ್ಲವೇ ಅಲ್ಲ ಎಂದು ನಂಬಿರುವವರೂ ಇದ್ದಾರೆ.

	ಸ್ವಾರಸ್ಯದ ವಿಷಯವೆಂದರೆ ಕ್ರಿ.ಶ. 1912ರ ತನಕ ಭಾಸಕವಿ ವಿರಚಿತವೆಂದು ನಮಗೆ ಪರಿಚಿತವಾಗಿದ್ದುದು ಸುಭಾಷಿತ ಗ್ರಂಥಗಳಲ್ಲಿ ಹಂಚಿಹೋಗಿದ್ದ ಹದಿಮೂರು ಬಿಡಿ ಶ್ಲೋಕಗಳು ಮಾತ್ರ. ಭಾಸನ ವಿಚಾರವಾಗಿ ಅವನಿಗಿಂತ ಈಚಿನ ಕವಿಗಳ ಕೆಲವು ಉಲ್ಲೇಖಗಳೂ ದೊರೆತಿದ್ದುವು. ಕಾಳಿದಾಸ ತನ್ನ ಮಾಳವಿಕಾಗ್ನಿ ಮಿತ್ರ ನಾಟಕದ ಪ್ರಸ್ತಾವನೆಯಲ್ಲಿ "ಪ್ರಥಿತ ಯಶಸಾಂ ಭಾಸಸೌಮಿಲ್ಲ ಕವಿಪುತ್ರಾದೀನಾಂ ಪ್ರಬಂಧಾನ್ ಅತಿಕ್ರಮ್ಯ" ಎಂಬಲ್ಲಿ ಭಾಸನು ತನಗಿಂತ ಹಿಂದಿನ ಪ್ರಸಿದ್ಧ ಕವಿಗಳಲ್ಲಿ ಒಬ್ಬನೆಂದು ಪರಿಗಣಿಸಿರುವುದನ್ನೂ ಬಾಣ ತನ್ನ ಹರ್ಷ ಚರಿತೆಯ ಪ್ರಸ್ತಾವನೆಯಲ್ಲಿ "ಸೂತ್ರಧಾರಕೃತಾರಂ ಭೈರ್ನಾಟಕೈರ್ಬಹು ಭೂಮಿಕೈಃ ಸಪತಾಕೈರ್ಯಶೋಲೇಭೇ ಭಾಸೋ ದೇವಕುಲೈರಿವ" ಎಂಬುದಾಗಿ ಭಾಸನ ಪ್ರಸಿದ್ಧಿಗೆ ಕಾರಣಗಳಾದ ಅವನ ನಾಟಕಗಳ ಸ್ವರೂಪವನ್ನು ಸ್ಥೂಲವಾಗಿ ನಿರ್ದೇ ಶಿಸಿರುವುದನ್ನೂ ರಾಜಶೇಖರನ (ಸು.1000) ಸೂಕ್ತಿ ಮುಕ್ತಾವಳಿಯ "ಭಾಸನಾಟ ಚಕ್ರೇಪಕಚ್ಛೇಕೈಃ ಪರೀಕ್ಷಿತುಂಕ್ಷಿಪ್ತೇ ಸ್ವಪ್ನವಾಸದತ್ತಸ್ಯ ದಾಹತೋಭೂನ್ನಪಾವಕಃ" ಎಂಬ ಶ್ಲೋಕದಲ್ಲಿ ಭಾಸರಚಿತ ನಾಟಕ ಚಕ್ರದ ಅಗ್ನಿಪರೀಕ್ಷೆ ಮಾಡಿದಾಗ ಸ್ವಪ್ನವಾಸವದತ್ತೆ ಸರ್ವೋ ತ್ಕøಷ್ಟವಾಗಿ ಉತ್ತೀರ್ಣವಾಯಿತೆಂದು ಹೇಳಿರುವುದನ್ನೂ ಇಲ್ಲಿ ಮುಖ್ಯವಾಗಿ ಗಮನಿಸಬಹುದು.

	ತಿರುವಾಂಕೂರಿನ ಪಂಡಿತ ಗಣಪತಿಶಾಸ್ತ್ರಿಗಳು ಪ್ರಾಚೀನ ಗ್ರಂಥಗಳ ಅನ್ವೇಷಣೆಯಲ್ಲಿದ್ದಾಗ ಅವರಿಗೆ 1909ರಲ್ಲಿ ಪ್ರತಿಜ್ಞಾ, ಸ್ವಪ್ನ, ಅವಿಮಾರಕ, ಮಧ್ಯಮ ವ್ಯಾಯೋಗ, ಪಂಚರಾತ್ರ, ದೂತಘಟೋತ್ಕಚ, ಕರ್ಣಭಾರ, ಊರುಭಂಗ, ಬಾಲಚರಿತ, ಚಾರುದತ್ತ ಎಂಬ ಹತ್ತು ಸಂಸ್ಕøತ ರೂಪಕಗಳ ಗ್ರಂಥಾಕ್ಷರದ ಒಂದು ತಾಳಪತ್ರ ಪ್ರತಿಯೂ 1910ರಲ್ಲಿ ಪ್ರತಿಮಾ, ಅಭಿಷೇಕ ಮತ್ತು ದೂತವಾಕ್ಯ ಎಂಬ ಮೂರು ರೂಪಕಗಳ ಮತ್ತೊಂದು ಪ್ರತಿಯೂ ದೊರೆತವು. ಈ ಹದಿಮೂರು ರೂಪಕಗಳಲ್ಲೂ ಆರಂಭದಲ್ಲೇ "ನಾಂದ್ಯಂತೇತತಃ ಪ್ರವಿಶತಿ ಸೂತ್ರಧರಃ" ಎಂಬ ರಂಗ ಸೂಚನೆ; ಆಮೇಲೆ ಸೂತ್ರಧಾರನಿಂದ ಕಾವ್ಯವಸ್ತು ಸೂಚಕವಾದ (ಮುದ್ರಾಲಂಕಾರವುಳ್ಳ) ಮಂಗಳ ಶ್ಲೋಕ ಪಠಣ; ನಾಟಕದ ಅಥವಾ ನಾಟಕಕರ್ತೃವಿನ ಹೆಸರಿನ ಉಲ್ಲೇಖವೇ ಇಲ್ಲದ ಪುಟ್ಟ ಸ್ಥಾಪನೆ; ಒಂದು ನಾಟಕದಲ್ಲಿ ಪ್ರಯೋಗಿಸಿದ ವಾಕ್ಯ, ಪದಸಮೂಹ, ಶ್ಲೋಕ, ಶ್ಲೋಕಾರ್ಥಗಳು ಉಳಿದ ನಾಟಕಗಳಲ್ಲೂ ಕಂಡುಬರುವುದು; ಎಲ್ಲದರಲ್ಲಿಯೂ ಒಂದೇ ರೀತಿಯ ಭರತವಾಕ್ಯ ಇತ್ಯಾದಿ-ಈ ವಿವಿಧ ಸಾಮ್ಯಗಳ ಆಧಾರದ ಮೇಲೆ ಶಾಸ್ತ್ರಿಗಳು ಅಜ್ಞಾತಕರ್ತೃಕಗಳಾಗಿದ್ದ ಈ ಎಲ್ಲ ನಾಟಕಗಳೂ ಏಕಕರ್ತೃಕವೆಂದು ಸಹಜವಾಗಿಯೇ ನಿರ್ಧರಿಸಿದರು. ಈ ಹದಿಮೂರು ನಾಟಕಗಳಲ್ಲೂ ಬಾಣ ಹೇಳಿರುವ ಭಾಸನಾಟಕ ಸ್ವರೂಪಗಳ ಸ್ಪಷ್ಟವಾದ ಹೊಂದಾಣಿಕೆಯಿತ್ತು. ನಾಟಕ ಚಕ್ರವೆಂದೇ ಕರೆಯಬಹುದಾದ ಈ 13 ನಾಟಕಗಳಲ್ಲಿ ಒಂದಾಗಿದ್ದ ಸ್ವಪ್ನನಾಟಕ ವಾಸವದತ್ತೆಯ ವಿಷಯವಾಗಿದ್ದುದಲ್ಲದೆ ಸರ್ವೋ ತ್ಕøಷ್ಟವಾಗಿಯೂ ಇದ್ದು ರಾಜಶೇಖರಕವಿಯ ಮಾತುಗಳನ್ನು ಅದಕ್ಕೆ ಅವಯಿಸಬಹುದಾಗಿತ್ತು. ಆದ್ದರಿಂದ ಶಾಸ್ತ್ರಿಗಳು ಈ ಸ್ವಪ್ನನಾಟಕವನ್ನು ಭಾಸರಚಿತ ಸ್ವಪ್ನವಾಸವದತ್ತೆನಾಟಕವೆಂದೇ ನಿರ್ಣಯಿಸಿ, ಏಕಕರ್ತೃಕಗಳೆಂದು ಸಿದ್ಧವಾದ ಈ 13 ಅಜ್ಞಾತಕರ್ತೃ ನಾಟಕಗಳಲ್ಲಿ ಒಂದನ್ನು ರಚಿಸಿದವ ಭಾಸ ಎಂದು ಖಚಿತವಾದ ಮೇಲೆ ಅವೆಲ್ಲವೂ ಭಾಸರಚಿತವೇ ಎಂದು ಪ್ರತಿಪಾದಿಸಿದರು. ಆದರೆ ಈ ನಾಟಕಗಳ ಯಾವ ಹಸ್ತಪ್ರತಿಯಲ್ಲಾಗಲಿ ಗ್ರಂಥಕಾರನ ಹೆಸರಿರಲಿಲ್ಲ. ಅದೇ ವೇಳೆಗೆ ಸ್ವಪ್ನವಾಸವದತ್ತೆ ಎಂಬ ಹೆಸರಿದ್ದ ಮತ್ತೊಂದು ಮಾತೃಕೆ ದೊರೆತು ಅದೂ ಸ್ವಪ್ನನಾಟಕವೂ ಒಂದೇ ಎಂಬುದೂ ದೃಢಪಟ್ಟಿತು. ಶಾರದಾತನಯ (ಕ್ರಿ.ಶ. 12ಯ ಶತಮಾನ) ತನ್ನ ಭಾವಪ್ರಕಾಶದಲ್ಲಿ ಸ್ವಪ್ನವಾಸವದತ್ತೆವನ್ನು ಪ್ರಶಾಂತ ನಾಟಕವೆಂದು ಉಲ್ಲೇಖಿಸಿ ಆ ನಾಟಕದಿಂದ ಉದಾಹರಿಸಿರುವ 'ಚಿರಪ್ರಸುಪ್ತಃ ಕಾಮೋಯಂ' ಎಂಬ ಶ್ಲೋಕ ಶಾಸ್ತ್ರಿಗಳಿಗೆ ದೊರೆತ ನಾಟಕದ ಆರನೆಯ ಅಂಕದಲ್ಲಿದ್ದುದೂ ಅವರ ವಾದಕ್ಕೆ ಸಮರ್ಥನೆ ನೀಡಿತು. ಶಾಸ್ತ್ರಿಗಳ ಈ ನಿಲವನ್ನು ಕೀತ್, ಥಾಮಸ್, ಪರಂಜಪೆ ಮುಂತಾದ ಪ್ರಸಿದ್ಧ ವಿದ್ವಾಂಸರು ಸಮರ್ಥಿಸಿದರು. ಆದರೆ ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣದಲ್ಲಿ ಭಾಸನ ಸ್ವಪ್ನವಾಸವದತ್ತೆದಿಂದ (ವತ್ಸರಾಜ ಶೇಫಾಲಿಕ ಶಿಲಾತಲವನ್ನು ನೋಡಿ ಹೇಳುವುದು) ಉದಾಹೃತವಾಗಿರುವ 'ಪಾದಾಕ್ರಾಂತಾನಿ ಪುಷ್ಪಾಣಿ ಸೋಷ್ಮಚೇದಂ ಶಿಲಾತಲಂ 1 ನೂನಂ ಕಾಚಿದಿಹಾಸೀನಾ ಮಾಂದೃಷ್ಟಾ ಸಹಸಾಗತಾ ಎಂಬ ಶ್ಲೋಕ ಶಾಸ್ತ್ರಿಗಳಿಗೆ ದೊರೆತ ಸ್ವಪ್ನನಾಟಕದಲ್ಲಿಲ್ಲದಿದ್ದದನ್ನೂ ಸುಭಾಷಿತ ಗ್ರಂಥಗಳಲ್ಲಿ ಕಂಡುಬರುವ ಭಾಸರಚಿತ ಶ್ಲೋಕಗಳಲ್ಲೊಂದು ಈ ಹದಿಮೂರು ರೂಪಗಳಲ್ಲಿಲ್ಲದಿರುವುದನ್ನೂ ಪ್ರಧಾನಕಾರಣವಾಗಿಟ್ಟು ಬಾರ್ನೆಟ್, ಕಾನೊರಾಮಪಿಶರೋಬಿ ಮುಂತಾದವರು ಶಾಸ್ತ್ರಿಗಳ ನಿಲವನ್ನು ವಿರೋಧಿಸಿರು. (ಇದನ್ನು ಗಮನಿಸಿ ಪಾದಾಕ್ರಾಂತಾನಿ ಎಂಬ ಶ್ಲೋಕವನ್ನು ಶಾಸ್ತ್ರಿಗಳು ಸ್ವಪ್ನವಾಸವದತ್ತೆದ ಎರಡನೆಯ ಸಂಸ್ಕರಣದಲ್ಲಿ ನಾಲ್ಕನೆಯ ಅಂಕದ ಮೂರನೆಯ ಶ್ಲೋಕದ ಬಳಿಕ ಸೇರಿಸಿ ಮುದ್ರಿಸಿಬಿಟ್ಟರು). ವಿಂಟರ್‍ನಿಟ್ಸ್, ಸುಕ್ತಂಕರ್ ಮುಂತಾದ ಬೇರೆ ಕೆಲವು ವಿದ್ವಾಂಸರು ಕೂಲಂಕಷವಾಗಿ ವಿವೇಚಿಸಿ ಈ ನಾಟಕಗಳ ಕರ್ತೃತ್ವದ ವಿಚಾರದಲ್ಲಿ ಖಚಿತವಾದ ನಿರ್ಣಯಕ್ಕೆ ಬರಲು ಈಗ ಉಪಲಬ್ದವಾಗಿರುವ ಪ್ರಮಾಣಗಳು ಸಾಲವು ಎಂದು ಅಭಿಪ್ರಾಯಪಟ್ಟರು. ಹೀಗೆ ಭಿನ್ನಾಭಿಪ್ರಾಯಗಳಿಗೆ ಎಡೆಯಾಗಿ ಈ ನಾಟಕಗಳ ಕರ್ತೃ ಭಾಸನೇ ಅಲ್ಲವೆ ಎಂಬುದು ಇಂದೂ ಕೂಡ ತೊಡಕಿನ ಪ್ರಶ್ನೆಯಾಗಿಯೇ ಉಳಿದಿದೆ.

	ಕಾಥಿಯವಾಡದ ಗೊಂಡಾಲ್ ಎಂಬಲ್ಲಿಯ ನಿವಾಸಿಗಳಾದ ಜೀವರಾಮ ಕಾಳಿದಾಸಶಾಸ್ತ್ರಿ ಎಂಬುವರು 1941ರಲ್ಲಿ ಯಜ್ಞಫಲ ಎಂಬ ಸಂಸ್ಕøತ ನಾಟಕವನ್ನು ದೇವನಾಗರೀ ಲಿಪಿಯಲ್ಲಿದ್ದ ಎರಡು ಪ್ರತಿಗಳ ಆಧಾರದ ಮೇಲೆ ಪ್ರಕಟಿಸಿ, ಭಾಸರಚಿತವೆನ್ನಲಾದ ತಿರುವಾಂಕೂರಿನ ಹದಿಮೂರು ನಾಟಕಗಳಂತೆಯೇ ಇರುವುದರಿಂದ ಅದೂ ಭಾಸರಚಿತವೇ ಎಂದು ಪ್ರತಿಪಾದಿಸಿದರು. ಈ ನಾಟಕದ ವಸ್ತು ರಾಮಾಯಣದ ಬಾಲಕಾಂಡದ ಕಥೆ; ಪ್ರತಿಮಾ ನಾಟಕದ ಕಥೆಗೆ ಪೂರ್ವವರ್ತಿಯೆಂದು ಹೇಳಬಹುದು. ಇದು ಭಾಸರಚಿತವಿರಬೇಕೆಂದೇ ಕೆಲವು ವಿಮರ್ಶಕರ ಅಭಿಪ್ರಾಯ. ಆದ್ದರಿಂದ ಇದೂ ಸೇರಿದರೆ ಭಾಸರಚಿತವೆನ್ನಬಹುದಾದ ನಾಟಕಗಳೂ ಹದಿನಾಲ್ಕು ಎಂದಾಯಿತು. ಆದರೆ ಯಜ್ಞಫಲ ಇತ್ತೀಚಿನವರಿಂದ ರಚಿತವಾದ ಖೊಟ್ಟಿ ನಾಟಕವೆಂಬ ಅಭಿಪ್ರಾಯಕ್ಕೆ ಬರಲಾಗಿದೆ. ಇವೆಲ್ಲವೂ ಪ್ರದರ್ಶನಕ್ಕೆ ಯೋಗ್ಯವಾಗಿರುವುದು ಇವುಗಳ ವೈಶಿಷ್ಟ್ಯ. ಇವು ಭಾಸರಚಿತ ಮೂಲ ನಾಟಕಗಳ ಸಂಗ್ರಹದರೂಪ ಮಾತ್ರ; ಪ್ರದರ್ಶನಕ್ಕಾಗಿಯೇ ಹೀಗೆ ರೂಪಾಂತರಿತವಾದವು ಎಂಬ ಅಭಿಪ್ರಾಯವೂ ಇದೆ. ಈ ನಾಟಕಗಳಲ್ಲಿ ಪುರುಷ ಪಾತ್ರಗಳೇ ಹೆಚ್ಚು. ದೂತವಾಕ್ಯ, ಕರ್ಣಭಾರಗಳಲ್ಲಿ ಸ್ತ್ರೀಪಾತ್ರಗಳೇ ಇಲ್ಲ. ಪಂಚರಾತ್ರದಲ್ಲಿ ಬರುವ ಬೃಹನ್ನಳೆ ವಸ್ತುತಃ ಅರ್ಜುನನೇ. ಭಾಸನ ಪಂಚರಾತ್ರರೀತ್ಯ ಮಹಾಭಾರತಯುದ್ಧದ ಪ್ರಸಕ್ತಿಯೇ ಇಲ್ಲ. ಹೀಗೆ ಒಂದೊಂದು ನಾಟಕದಲ್ಲೂ ಭಾಸನ ಕೈವಾಡ ಪರಿಪೂರ್ಣವಾಗಿದೆ. ಒಟ್ಟಿನಲ್ಲಿ ಈ ನಾಟಕಗಳಲ್ಲಿ ಕಾಳಿದಾಸ ಸಾದಿಗಳಿಂದ ರಚಿತವಾದ ನಾಟಕಗಳಿಗಿಂತ ಸ್ವರೂಪತಃ ಭಿನ್ನವಾಗಿದ್ದರೂ ರಸಭಾವಪರಿಪುಷ್ಟಿ, ರಚನಾಕೌಶಲ, ಕಲಾನೈಪುಣ್ಯಗಳ ದೃಷ್ಟಿಯಿಂದ ಅವೆಲ್ಲಕ್ಕೂ ಆದರ್ಶಪ್ರಾಯವಾಗಿವೆ. ಈ ನಾಟಕಗಳಲ್ಲಿ ಬರುವ ಎಷ್ಟೋ ಮಾತುಗಳು ನಿತ್ಯಸತ್ಯಗಳಾಗಿದ್ದು ಸೂಕ್ತಿರತ್ನಗಳೆಂದು ಪರಿಗಣಿಸಲು ಅರ್ಹವಾಗಿವೆ. ಅಲ್ಲಲ್ಲೇ ಬರುವ ಪತಾಕಾ ಸ್ಥಾನಗಳಿಗೆ ಮಾರುಹೋಗದ ಪ್ರೇಕ್ಷಕರೂ ಓದುಗರೂ ವಿರಳ. ವರ್ಣನೆಗಳು ಸ್ವಲ್ಪ ದೀರ್ಘವಾಗಿದ್ದರೂ ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಮನಮೋಹಕವಾಗಿವೆ.

	ನಾಲ್ಕು ಅಂಕಗಳ ಪ್ರತಿಜ್ಞಾಯೌಗಂಧರಾಯಣ ಭಾಸನ ನಾಟಕಗಳಲ್ಲಿ ಅತ್ಯುತ್ತಮವಾದುದೆಂದು ಪ್ರಸಿದ್ಧಿಗಳಿಸಿರುವ ಆರು ಅಂಕಗಳ ಸ್ವಪ್ನವಾಸವದತ್ತೆ ನಾಟಕದ ಪೂರ್ವಾರ್ಧದಂತಿದೆ. ಈ ಎರಡು ನಾಟಕಗಳೂ ಸೇರಿ ಹತ್ತು ಅಂಕಗಳಾಗುವುದರಿಂದಲೂ ಎರಡರ ಕಥೆಯೂ ಪಾತ್ರಗಳೂ ಒಂದಕ್ಕೊಂದು ಪೂರಕವಾಗಿರುವುದರಿಂದಲೂ ಪ್ರತಿಜ್ಞಾಯೌಗಂಧರಾಯಣದ ಸ್ಥಾಪನೆಯಲ್ಲಿ 'ವಯಮಪಿ ಪ್ರಕರಣಮಾರಭಾಮಹೇ ಎಂದು ಸೂತ್ರಧಾರ ಹೇಳುವುದರಿಂದಲೂ ಭಾಸ ಬರೆದುದು ಒಟ್ಟಾಗಿ ಒಂದು ಪ್ರಕರಣ; ಅದನ್ನು ಈಚಿನವರು ಪ್ರದರ್ಶನಕ್ಕೆ ಅಳವಡಿಸಿಕೊಳ್ಳುವಾಗ ಎರಡಾಗಿ ಒಡೆದು ಬೇರೆಬೇರೆ ಹೆಸರಿಟ್ಟಿದ್ದಾರೆಂಬುದು ಕೆಲವರ ಅಭಿಪ್ರಾಯ. ಈ ಎರಡು ನಾಟಕಗಳನ್ನೂ ನಾಟಕೀಯವಾಗಿ ಹೆಣೆಯುವುದರಲ್ಲಿ ಶೃಂಗಾರ-ವೀರಾದಿ ರಸಗಳಿಗೆ ಸಮಪ್ರಾಶಸ್ತ್ಯವನ್ನು ತುಂಬುವುದರಲ್ಲಿ ವಿದೂಷಕನ ಪಾತ್ರದಿಂ ಹಾಸ್ಯಮಯವಾದ ವಾತಾವರಣ ಕಲ್ಪಿಸುವುದರಲ್ಲಿ ಭಾಸ ತನ್ನ ಕಲಾಪ್ರೌಢಿಮೆ ಮೆರೆದಿದ್ದಾನೆ. ಈ ಎರಡು ನಾಟಕಗಳಿಗೆ ನೀಡಿರುವ ಹೆಸರುಗಳಲ್ಲೇ ತನ್ನ ಚಿತ್ಯಪೂರ್ಣ ಪ್ರತಿಭೆ ಪ್ರದರ್ಶಿಸಿದ್ದಾನೆ. ಮಹಾಸೇನನ ಕುತಂತ್ರಕ್ಕೆ ಬಲಿಯಾಗಿ, ಕಟ್ಟಿಗೆಯ ಆನೆಯನ್ನು ನಿಜವಾದ ಆನೆಯೆಂದು ಹಿಡಿಯಹೋಗಿ ಅವನ ಸೈನಿಕರಿಗೆ ಸೆರೆಸಿಕ್ಕಿ ಉಜ್ಜಯಿನಿಯ ರಾಜನ ಬಂದಿಯಾದ ವತ್ಸರಾಜ ಉದಯನನ ಬವಣೆ, ಮಹಾಸೇನನ ಮಗಳಾದ ವಾಸವದತ್ತೆಗೆ ವೀಣೆ ಕಲಿಸುವ ಶಿಕ್ಷಕನಾಗುವ ಸನ್ನಿವೇಶ, ಅವರ ಪ್ರಥಮ ಪ್ರಣಯ, ಈ ಮೋಸಕ್ಕೆ ತಕ್ಕ ಪ್ರತೀಕಾರವನ್ನು ಮೋಸದಿಂದಲೇ ಮಾಡುವೆನೆಂದು ಪ್ರತಿಜ್ಞೆ ಮಾಡಿ ಉದಯನ ವಾಸವದತ್ತೆಯರಿಬ್ಬರನ್ನೂ ಇನ್ನೊಂದು ಆನೆಯ ತಂತ್ರದಿಂದಲೇ ಉಜ್ಜಯಿನಿಯಿಂದ ಬಿಡಿಸಿಕೊಂಡು ಬಂದು ಪ್ರತಿಜ್ಞೆಯನ್ನು ನಿರ್ವಹಿಸಿದ ಯೌಗಂಧರಾಯಣಮ ಮಹಾತಂತ್ರ ಇದು ಪ್ರತಿಜ್ಞಾಯೂಗಂಧರಾಯಣದ ಕಥಾವಸ್ತು. ಈ ಕಥೆಯಲ್ಲಿ ರಾಜತಂತ್ರ ಕೌಶಲಕ್ಕೆ ಹೆಚ್ಚಿನ ಸ್ಥಾನ; ಪ್ರೇಮ ಗೌಣ. ಆದರೆ ಸ್ವಪ್ನವಾಸವದತ್ತೆರಲ್ಲಿ ರಾಜತಂತ್ರ ಕೌಶಲಕ್ಕೆ ಕಡಿಮೆಯಿಲ್ಲದ ಮಹತ್ತ್ವದ ಸ್ಥಾನ ಶೃಂಗಾರರಸಕ್ಕೆ ಮೀಸಲಾಗಿರುವುದರಿಂದ ಈ ನಾಟಕ ಮತ್ತಷ್ಟು ಮನರಂಜಕವಾಗಿದೆ. ವಾಸವದತ್ತೆಯ ಮೇಲಿನ ಅತಿಪ್ರೇಮವೇ ಉದಯನನ ರಾಜ್ಯ ಶತ್ರುವಶವಾಗುವುದಕ್ಕೆ ಕಾರಣವೆನಿಸಿದಾಗ, ಮಂತ್ರಿ ಯೌಗಂಧರಾಯಣ ರಾಜ್ಯವನ್ನುಳಿಸಿ ನಿಷ್ಕಂಟಕವಾಗಿಸಲು ನೆರೆಯ ಮಗಧರಾಜ ಪುತ್ರಿ ಪದ್ಮಾವತಿಯ ವಿವಾಹಪ್ರಯತ್ನವನ್ನು ಕೈಕೊಳ್ಳಬೇಕಾಯಿತು. ಅದು ಸಫಲವಾಗಲು ಅಡ್ಡಿಯಾಗಿದ್ದ ವಾಸವದತ್ತೆಯನ್ನು ಸತ್ತಳೆಂದು ಸುಳ್ಳುಸುದ್ದಿ ಹರಡಬೇಕಾಯಿತು. ಗಂಡನಿಗೆ ಲೇಸಾಗಲೆಂದು ವಾಸವದತ್ತೆ ಮಂತ್ರಿಯ ಈ ಯೋಜನೆಗೆ ಒಪ್ಪಿ ತಾನು ಪದ್ಮಾವತಿಯ ಪರಿಚರಿಕೆಯಾಗಿ ಕೆಲವೊಂದು ಕಾಲ ಕಳೆಯುವುದಕ್ಕೂ ಪದ್ಮಾವತಿ ತನ್ನ ಗಂಡನನ್ನೇ ಮದುವೆಯಾಗುವುದಕ್ಕೂ ಒಪ್ಪುವುದು ಅವಳ ತ್ಯಾಗದ ವೈಶಿಷ್ಟ್ಯವನ್ನು ತೋರಿಸುವಂತಿದೆ. ಇದು ಬಹು ಗುಪ್ತವಾಗಿರುವ ಸಂಗತಿಯಾದ್ದರಿಂದ ಉದಯನನ್ನೇ ಆದಿಯಾಗಿ ನಾಟಕದಲ್ಲಿ ಮತ್ತಾರಿಗೂ ಗೊತ್ತಾಗಿರುವುದಿಲ್ಲ. ಪದ್ಮಾವತೀ ಪರಿಣಯವಾದ ಮೇಲೆ ಕಡೆಗೆ ಯೌಗಂಧರಾಯಣನ್ನೇ ಮತ್ತೆ ವಾಸವದತ್ತೆಯ ಪುನಸ್ಸಮಾಗಮನವನ್ನೂ ಉದಯನನಿಗೆ ಮಾಡಿಸಿ ಕ್ಷಮೆಕೇಳುತ್ತಾನೆ.

	ಇಡೀ ನಾಟಕದ ರಸಸ್ಥಾನವೆಲ್ಲ ವಿಪ್ರಲಂಭ ಶೃಂಗಾರಕ್ಕೇ ಮೀಸಲಾಗಿದೆ. ನಾಯಕನಿಗೆ ತನ್ನ ಮೆಚ್ಚಿನ ಮಡದಿ ನಿಜವಾಗಿಯೂ ಮೃತಳಾದಳೆಂಬ ಭಾವನೆ ಬೇರೂರಿಬಿಟ್ಟರೆ, ಅವನು ಪುನರ್ವಿವಾಹವಾದ ಮೇಲೆ ಮತ್ತೆ ಮೊದಲ ಪತ್ನಿಯನ್ನು ಪ್ರೀತಿಸಲು ಸಾಧ್ಯವೆ? ಇದು ಈ ನಾಟಕದ ಪ್ರಮೇಸಮಸ್ಯೆ. ಯೌಗಂಧರಾಯಣನ ರಾಜತಂತ್ರ ಇದನ್ನು ಸಾಧಿಸಲಾರದು, ಅದಕ್ಕಾಗಿ ಉದಯನನ ಸ್ಮøತಿಪಟಲದಲ್ಲಿ ವಾಸದತ್ತೆಯ ನೆನಪು ಆಗಾಗ ಮರುಕಳಿಸುತ್ತಿರುವಂತೆ ತೋರಿಸಲು ಭಾಸ ತುಂಬ ಎಚ್ಚರ ವಹಿಸಿ ತನ್ನ ಪ್ರತಿಭೋನ್ವೇಷವನ್ನು ಮೆರಿದಿದ್ದಾನೆ. ಮೇಲ್ನೋಟಕ್ಕೆ ವಿದೂಷಕನ ಪರಿಹಾಸದ ಪ್ರಶ್ನೆಯಂತೆ ಕಂಡರೂ ನಿನಗೆ ಅಂದಿನ ವಾಸವದತ್ತೆ ಮೆಚ್ಚಿನವಳೋ? ಇಂದಿನ ಪದ್ಮಾವತಿಯೋ? ಎಂಬ ಜಟಿಲ ಪ್ರಶ್ನೆ ಇಡಿಯ ನಾಲ್ಕನೆಯ ಅಂಕವನ್ನೆಲ್ಲ ತುಂಬಿದೆ; ರಾಜನ ಹೃದಯದಲ್ಲಿ ವಾಸವದತ್ತೆಗಿರುವ ಸ್ಥಾನವನ್ನು ಗಟ್ಟಿಮಾಡಿದೆ.

	ಅದರ ಮುಂದಿನ ವಿವರಣೆಯೇ ನಾಟಕದ ರಸಕೇಂದ್ರವಾದ ಐದನೆಯ ಅಂಕದ ಸ್ವಪ್ನದೃಶ್ಯವೆನ್ನೆಬಹುದು. ಇಲ್ಲಿ ಅರಿವು-ಮೆರವು. ಎಚ್ಚರ-ಕನಸು ಇವು ನೆಳಲು ಬೆಳಕುಗಳಂತೆ ಬರುತ್ತ, ಹೋಗುತ್ತ, ವಾಸವದತ್ತೆ ಇದ್ದಾಳೆ, ಇಲ್ಲ ಎಂಬ ಅದ್ಫುತ ಸಮ್ಮಿಶ್ರವಾತಾವರಣದಲ್ಲಿ ಪರ್ಯವಸಾನಗೊಳ್ಳುತ್ತದೆ. ನಾಟಕವೇ ಒಂದು ತೋರಿಕೆ; ಅದರಲ್ಲಿ ಸತ್ಯ ಮಿಥ್ಯೆಗಳ ಸಮ್ಮಿಶ್ರಣ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ. ಇಲ್ಲಿ ಜಾಗ್ರತ ಪ್ರಪಂಚದ ವಾಸವದತ್ತೆಗೂ ಉದಯನನ ಸ್ವಪ್ನ ಪ್ರಪಂಚ ವಾಸವದತ್ತೆಗೂ ನಾಟಕೀಯ ಸಂವಿಧಾನ ತಂತ್ರದಿಂದಲೇ ಅಭೇದ ಪ್ರಾಪ್ತವಾಗಿ, ರೋಮಾಂಚಕಾರಿಯಾಗಿದೆ. ಅವಳು ರಾಜನ ತೋಳನ್ನೆತ್ತಿ ಹಾಸಿಗೆಯ ಮೇಲಿರಿಸುವಾಗ. ಈ ಸ್ಪರ್ಶಸುಖ ಪ್ರತ್ಯಕ್ಷವಾದ ಮೇಲೆ ಯಾರೇನೆಂದರೂ ರಾಜನ ಮನಸ್ಸಿನಲ್ಲಿ ಅವಳ ಪುನಸ್ಸಮಾಗುಮ ಪ್ರತೀಕ್ಷ ದೃಢವಾಗುತ್ತದೆ. ಎರಡನೆಯ ಮದುವೆಯಾಗಿದ್ದರೂ ರಾಜನಿಗೆ ಮೊದಲ ಪ್ರೇಮಸ್ವಲ್ಪವೂ ಮಾಸಿಲ್ಲವೆಂಬ ಪೂರ್ಣ ಭರವಸೆ ವಾಸವದತ್ತೆಗೆ ದೊರೆತು ಸಮಾಧಾನ ತರುತ್ತದೆ. ಉದಯನ ವಾಸವದತ್ತೆಯರ ಈ ವಿಪ್ರಲಂಭ ಶೃಂಗಾರ ಸಂಸ್ಕøತ ನಾಟಕ ಸಾಹಿತ್ಯದಲ್ಲೇ ಅನಘ್ರ್ಯವಾದ ಒಂದು ರಸಘಟ್ಟಿ..

	ಪದ್ಮಾವತಿ, ವಾಸವದತ್ತೆ, ಯೌಗಂಧರಾಯಣ, ವಿದೂಷಕ-ಈ ಎಲ್ಲ ಪಾತ್ರಗಳ ಹೃದಯಾಂತರಾಳದಲ್ಲಿ ಮೂಡುವ ಒಳತೋಟ ಈ ನಾಟಕದ ಉತ್ಕರ್ಷಕ್ಕೆ ಹೆಚ್ಚಿನ ಸಾಮಗ್ರಿ ಒದಗಿಸಿದೆ. ಭಾಸನ ಮನೋವೈಜ್ಞಾನಿಕ ಅಂತರ್ದೃಷ್ಟಿ ಸ್ವಪ್ನವಾಸದತ್ತದಲ್ಲಿ ನಿಜವಾಗಿಯೂ ಸಫಲತೆ ಕಂಡುಕೊಂಡಿದೆಯೆನ್ನಬಹುದು. ಇಬ್ಬರು ನಾಯಕಿಯರನ್ನೂ ವಿಭಿನ್ನ ರೀತಿಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವಂತೆ ಚಿತ್ರಿಸಿರುವುದು ಭಾಸನ ವೈಶಿಷ್ಟ್ಯವೇ ಸರಿ. ತಿಳಿಯಾದ, ಲಘುವಾದ ಇಲ್ಲಿಯ ವಿದೂಷಕನ ಹಾಸ್ಯ ಕೂಡ ಈ ನಾಟಕದ ಮೇಲ್ಮೈಗೆ ಪೋಷಕವಾಗಿದೆ.

	ರಾಮಾಯಣ ನಾಟಕಗಳಲ್ಲೆಲ್ಲ ಪ್ರತಿಮಾನಾಟಕದ ಸಂವಿಧಾನ ಕೌಶಲ ಆಧುನಿಕರಿಗೆ ಕೂಡ ಮೆಚ್ಚುವಷ್ಟು ರಮಣೀಯವಾಗಿದೆ. ಕೈಕೆ, ರಾಮ, ಭರತ, ಲಕ್ಷ್ಮಣ, ಸೀತೆ ಈ ಎಲ್ಲರ ಪಾತ್ರಗಳೂ ರಾಮಾಣಯಣಕ್ಕಿಂತ ಉಜ್ಜ್ವಲತರಾವಾಗಿ ಕಳಂಕರಹಿತವಾಗಿ ಶೋಭಿಸುವಂತೆ ಭಾಸ ತನ್ನ ನೂತನ ಕಥಾ ಸೃಷ್ಟಿ ಮಾಡಿದ್ದಾನೆ. ದಶರಥನಿಗೆ ಪುತ್ರಶೋಕದಿಂದ ಸಾವೆಂಬ ಶಾಪವಿದ್ದುದರಿಂದ ರಾಮ ಕಾಡಿಗೈದುವಂತೆ ವಸಿಷ್ಠಾದಿಗಳೇ ಕೈಕೇಯಿಯನ್ನೊಲಿಸಿಕೊಂಡು ಯೋಜನೆ ಮಾಡುತ್ತಾರೆ. ಇಲ್ಲಿಯ ಕೈಕೇಯಿ ರಾಜ್ಯದಾಹದಿಂದ ಕುರುಡಾಗಿ ವೈಧವ್ಯ ತಂದುಕೊಂಡು ನೀಚೆಯಲ್ಲ; ಭರತನೇ ಆದಿಯಾಗಿ ಎಲ್ಲರಿಂದಲೂ ಬೈಸಿಕೊಂಡರೂ ರಾಮನ ಕ್ಷೇಮಚಿಂತನೆಗಾಗಿಯೇ ಮಹಾತ್ಯಾಗ ಮಾಡಿದ ಮಹಿಳಾ ಮಣಿ, ಹೀಗೆ ರಾಮಾಯಣದ ಮೂಲಕಥೆಯಲ್ಲಿ ಇಷ್ಟೊಂದು ಧಾರಾಳವಾಗಿ ಬದಲಾವಣೆ ಮಾಡಿಕೊಳ್ಳುವ ಕಲ್ಪನಾಸಾಮಥ್ರ್ಯ ಮತ್ತಾವ ಸಂಸ್ಕøತ ಕವಿಯಲ್ಲೂ ನಮಗೆ ಕಾಣಸಿಗದು. ದಶರಥನ ಸತ್ಯಪರಿಪಾಲನೆಗಾಗಿ ಕೈಕೇಯಿಯ ಶುಲ್ಕವನ್ನು ಅವನು ತೀರಿಸಲೇಬೇಕಾಗಿಯೂ ಇದ್ದಿತಂತೆ. ಇಲ್ಲಿ ಉಡಲರಿಯದ ಸೀತೆಗೆ ನಾರುಮಡಿಗಳನ್ನು ಕೈಕೆ ತಂದು ಉಡಿಸುವುದಿಲ್ಲ. ನಾಟ್ಯಶಾಲೆಯನ್ನು ನೋಡಲು ಹೋಗಿದ್ದ ಸೀತೆ ಬಾಲಚಾಪಲ್ಯದಿಂದ ಅಭಿಷೇಕದ ದಿನವೇ ಮುನ್ಸೂಚನೆಯೋ ಎಂಬಂತೆ ದೈವಪ್ರೇರಿಗಳಾಗಿ ನಾರುಸೀರೆಯನ್ನುಟ್ಟಿರುತ್ತಾಳೆ. ರಾಜ್ಯ ತಪ್ಪಿತೆಂದು ರಾಮನಿಗಾಗಲಿ ಸೀತೆಗಾಗಲಿ ಇಲ್ಲಿ ಎಳ್ಳಷ್ಟೂ ದುಃಖವಿಲ್ಲ. ಅದಕ್ಕೆ ಪ್ರತಿಯಾಗಿ ತಮಗೆ ಬೇಗೆ ಧರ್ಮಾಚರಣೆಯ ಸದವಕಾಶ ಲಭಿಸಿತೆಂಬ ಹರ್ಷವಿದೆ. ಭರತನಿಗೆ ದಶರಥನ ಮರಣವೃತ್ತಾಂತ ಇಲ್ಲಿ ಕೈಕೆಯ ಬಾಯಿಂದ ತಿಳಿಯುವುದಿಲ್ಲ; ಊರ ಹೊರಗೇ ಪ್ರತಿಮಾಗೃಹದ ಪೂಜಾರಿಯಿಂದ ಕ್ರಮಕ್ರಮವಾಗಿ, ಪ್ರಾಸಂಗಿಕವಾಗಿ ತಿಳಿಯುತ್ತದೆ. ಸೀತೆ ಸವರ್ಣಮೃಗಕ್ಕೆ ಆಸೆಪಟ್ಟು, ಲಕ್ಷ್ಮಣನನ್ನು ಧಿಕ್ಕರಿಸುವ ಪ್ರಸಂಗವೇ ಇಲ್ಲಿ ಇಲ್ಲ. ತಂದೆಯ ಶ್ರಾದ್ಧಕ್ಕೆ ಸುವರ್ಣಮೃಗ ಪ್ರಶಸ್ತವೆಂಬ ರಾಮನ ಭಾವನೆಯಿಂದಲೇ ಆ ಮಾಯಾಮೃಗದವೃತ್ತಾಂತ ಸೀತಾಪಹರಣಕ್ಕೆ ನಿಮಿತ್ತವಾಗುತ್ತದೆ. ಹೂವಿನ ಹೃದಯ ಭರತನಿಗೆ ಕೆಟ್ಟಸುದ್ದಿಗಳನ್ನು ಕ್ರಮಕ್ರಮವಾಗಿ ಅರುಹಲೆಂದು ಭಾಸ ಯೋಜಿಸಿರುವ ಪ್ರತಿಮಾಗೃಹದ ವೃತ್ತಾಂತ ನಿಜವಾಗಿಯೂ ಶ್ಲಾಘನೀಯವಾಗಿದೆ. ದಿಲೀಪ, ಅಜ, ಮುಂತಾದ ರಾಜರ ಪ್ರತಿಮೆಗಳಿಂದ ದೇವಾಲಯವೇ ಹೊರತು ಅದು ದೇವತಾಪ್ರತಿಮೆಗಳಿರುವ ದೇವಾಲಯವಲ್ಲವೆಂದು ಮಾವನ ಮನೆಯಲ್ಲೆ ಬಹುಕಾಲ ಕಳೆದು ಗಡಿಬಿಡಿಯಿಂದ ಅಯೋಧ್ಯೆಗೆ ಬರುವ ಭರತನಿಗೆ ಮೊದಲು ಪೂಜಾರಿಯಿಂದ ತಿಳಿಯುತ್ತದೆ. ಅಲ್ಲಿ ಮೂರನೆಯ ಪ್ರತಿಮೆಯೂ ಒಂದಿರುವುದು ಅವನಲ್ಲಿ ಕೆಟ್ಟ ಸಂಶಯಕ್ಕೆ ನಿಮಿತ್ತವಾಗುತ್ತದೆ. ಸತ್ತವರ ಪ್ರತಿಮೆಗಳಷ್ಟೇ ಇರುತ್ತವೆಂದ ಮೇಲಂತೂ ದಶರಥನೂ ಸತ್ತಾಗಿರಬೇಕೆಂಬುದು ಮನಸ್ಸಿನಲ್ಲಿ ಸುಳಿದು ಅವನು ಮೂರ್ಛೆ ಹೋಗುತ್ತಾನೆ. ಸ್ವಪ್ನವಾಸವದತ್ತೆದ ಸ್ವಪ್ನದೃಶ್ಯದಂತೆಯೇ ಪ್ರತಿಮಾನಾಟಕದ ಪ್ರತಿಮಾದೃಶ್ಯವಾದರೂ ಭಾಸನ ಅಸಾಧಾರಣ ನಾಟಕ ತಂತ್ರಕ್ಕೆ ಮಾನದಂಡದಂತಿದೆ.

	ಅವಿಮಾರಕ ಏಳು ಅಂಕಗಳ ಒಂದು ಅದ್ಭುತ-ಶೃಂಗಾರ ನಾಟಕ. ಪ್ರಾಯಶಃ ಇದು ಭಾಸನ ಪ್ರಥಮ ರಚನೆಯಿರಬೇಕು. ಕ್ಷತ್ರಿಯ ಕುಮಾರನೊಬ್ಬ ಚಂಡಾಲ ವೇಶದಲ್ಲಿದ್ದು, ಮದ್ದಾನೆಗೆ ಸಿಕ್ಕಿದ ರಾಜಪುತ್ರಿಯನ್ನು ರಕ್ಷಿಸಿ, ಗುಪ್ತವಾಗಿ ಅವಳ ಅಂತಃಪುರದಲ್ಲಿದ್ದು ರಾಜಕೋಪಕ್ಕೆ ಹೆದರಿ ಓಡುತ್ತ, ವಿದ್ಯಾಧರನೊಬ್ಬ ಕರುಣಿಸಿದ ಅದ್ಭುತ ಉಂಗುರದ ಪ್ರಭಾವದಿಂದ ಆಕೆಯನ್ನು ಮದುವೆಯಾಗುವ ಅದ್ಭುತ ಸಾಹಸಮಯ ರಮ್ಯ ಕಥಾಪ್ರಸಂಗ ಇಲ್ಲಿದೆ. ಅವಳ ತಂಗಿಗೂ ನಾಯಕನ ತಮ್ಮನಿಗೂ ಹೀಗೆಯೇ ಮದುವೆಯಾಗುತ್ತದೆ. ಉದ್ದದ ಕಥೆ ಅತಿ ಮಾನುಷವೂ ಅಸಾಧಾರಣವೂ ಆದ ಸಂವಿಧಾನದಲ್ಲಿ ಅವಾಸ್ತವಿಕತೆಯಿಂದ ತುಂಬಿದೆ. ವಸ್ತು ರಚನಾ ಕೌಶಲವಾಗಲಿ, ರಸಪರಿಪೋಷವಾಗಲಿ ಈ ನಾಟಕದಲ್ಲಿ ಕಂಡುಬರುವುದಿಲ್ಲ. 

	ಚಾರುದತ್ತ ಒಂದು ಸುಂದರ ಸಾಮಾಜಿಕ ನಾಟಕ. ಇದರ ಮೊದಲ ನಾಲ್ಕು ಅಂಕಗಳು ಮಾತ್ರ ಸಿಕ್ಕಿರುವುದರಿಂದ ಇದು ಅಸಮಗ್ರಸ್ಥಿತಿಯಲ್ಲಿದೆ. ಶೂದ್ರಕನ ಮೃಚ್ಛಕಟಿಕಕ್ಕೆ ಈ ನಾಟಕವೇ ಆಧಾರವೆಂಬುದು ಕೆಲವರ ಅಭಿಪ್ರಾಯ. ಪ್ರೇಮಕ್ಕೆ ಹಣ ಮುಖ್ಯವಲ್ಲ, ಗುಣ ಮುಖ್ಯ ಎಂಬುದೇ ಈ ನಾಟಕದ ತಿರುಳು. ಮೃಚ್ಛಕಟಿಕದಲ್ಲಿ ಆರ್ಯಕಪಾಲಕರಿಗೆ ಸಂಬಂಧಿಸಿದ ರಾಜ್ಯಕ್ರಾಂತಿ ಪ್ರಕರಣ ಚಾರುದತ್ತ ವಸಂತಸೇನೆಯರ ಪ್ರಣಯದೊಡನೆ ಹಣೆದುಕೊಂಡಿದ್ದರೆ, ಚಾರುದತ್ತನಾಟಕದಲ್ಲಿ ಆ ವೃತ್ತಾಂತವೇ ಇಲ್ಲದಿರುವುದು ಎರಡು ನಾಟಕಗಳಿಗೂ ಇರುವ ಪ್ರಧಾನ ಭೇದ. ಉದಾರಿಯಾದ ಚಾರುದತ್ತ ನಿರಪೇಕ್ಷವಾಗಿ ಆತನ ಹೃದಯಕ್ಕೆ ಅಂಟಿಕೊಂಡ ಇನ್ನೊಂದು ಜೀವವಾದ ವಸಂತಸೇನೆ, ತನ್ನ ಮೂಢತೆ ಹಾಗೂ ನಿಕಟವಾದ ನಡತೆಯಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕಾರ-ಇವೆಲ್ಲ ಪಾತ್ರಗಳು ನಾಟಕಕ್ಕೆ ಕಳೆಕಟ್ಟುತ್ತವೆ. ಮೃತ್ ಶಕಟಿಕಾ ವೃತ್ತಾಂತವೂ ಶೂದ್ರಕನ ಸ್ವತಂತ್ರ ಕಲ್ಪನೆಯಿರಬೇಕು. ಅಭಿನವಗುಪತ್ತ ಉಲ್ಲೇಖಿಸಿರುವ ದರಿದ್ರ ಚಾರುದತ್ತವೂ ಭಾಸನ ಈ ಚಾರುದತ್ತವೂ ಒಂದೇ ಇರಬಹುದು.

	ಮೂರು ಅಂಕಗಳ ಪಂಚರಾತ್ರದ ಕಥಾವಸ್ತು ಉತ್ತರಗೋಗ್ರಹಣ ಮತ್ತು ಅಭಿಮನ್ಯು-ಉತ್ತರೆಯರ ವಿವಾಹವೇ ಆದರೂ ವಸ್ತುವಿನ ಧಾಟಿ ಮತ್ತು ನಿರ್ವಹಣಾರೀತಿ ಪೂರ್ಣವಾಗಿ ಕವಿಕಲ್ಪಿತ. ಮಹಾಭಾರತದ ಕಥೆಯ ಆಧಾರದ ಮೇಲೆ ಭಾಸ ರಚಿಸಿರುವ ಆರು ನಾಟಕಗಳಲ್ಲಿ ಇದೇ ಅತ್ಯುತ್ತಮವಾದುದು. ದುರ್ಯೋ ಧನ ಅನುಷ್ಠಿಸಿದ ಒಂದು ಯಾಗದ ಕೊನೆಯಲ್ಲಿ ದ್ರೋಣಾಚಾರ್ಯ ಪಾಂಡವರಿಗೆ ಅರ್ಧ ರಾಜ್ಯ ಪ್ರದಾನವನ್ನೇ ತಮಗೆ ಗುರುದಕ್ಷಿಣಾರೂಪವಾಗಿ ಅಪೇಕ್ಷಿಸಿದುದೂ ಆ ದಕ್ಷಿಣೆ ಕೊಡಬೇಕಾದರೆ ಅಜ್ಞಾತವಾಸದಲ್ಲಿದ್ದ ಪಾಂಡವರ ಸಮಾಚಾರವನ್ನು ಐದು ದಿನಗಳೊಳೆಗೆ (ಪಂಚರಾತ್ರ) ತಿಳಿದುಹೇಳಬೇಕೆಂದು ದುರ್ಯೋ ಧನ ಷರತ್ತು ಹಾಕಿದುದೂ ಗೋಗ್ರಹಣಯುದ್ಧದಿಂದ ಅದನ್ನು ಸಾಧಿತವಾಗಲು ದುರ್ಯೋ ಧನ ಪಾಂಡವರಿಗೆ ಅರ್ಧರಾಜ್ಯಕೊಡುವುದೂ ಮಹಾಭಾರತಯುದ್ಧಕ್ಕೇ ಅವಕಾಶವಿಲ್ಲದಂತೆ ಮಾಡುವ ಮೂಲಕಥೆಯ ಹೊರಕಟ್ಟನ್ನೇ ಪಲ್ಲಟಗೊಳಿಸುವ ನಾಟಕೀಯ ಅಂಶಗಳು. ಸ್ತ್ರೀಪಾತ್ರಗಳೇ ಇಲ್ಲದ ವೀರರಸ ಪ್ರಧಾನವಾದ ಈ ನಾಟಕದಲ್ಲಿ ದುರ್ಯೋ ಧನ ಧರ್ಮವೀರ, ದ್ರೋಣ ದಯಾವೀರ, ಇತರರು ಯುದ್ಧವೀರರು.

	ಮಧ್ಯಮವ್ಯಾಯೋಗ, ದೂತವಾಕ್ಯ, ಕರ್ಣಭಾರ, ದೂತಘಟೋತ್ಕಚ, ಊರುಭಂಗ ಈ ಐದು ಮಹಾಭಾರತದ ಆಯಾ ಪ್ರಕರಣದ ಮೇಲೆ ರಚಿತವಾದ ಏಕಾಂಕ ನಾಟಕಗಳು. ಇಷ್ಟು ಏಕಾಂಕ ನಾಟಕಗಳನ್ನು ರಚಿಸಿರುವ ಸಂಸ್ಕøತ ಕವಿ ಭಾಸನೊಬ್ಬನೇ. ಹಿಡಿಂಬೆಯ ಮಗನೂ ತನ್ನ ಜನ್ಮಾರಭ್ಯ ತಂದೆಯಾದ ಭೀಮಸೇನನನ್ನು ಕಣ್ಣಾರ ಕಂಡರಿಯದವನೂ ಆದ ಘಟೋತ್ಕಚ ತನ್ನ ತಾಯಿಯ ಆಹಾರಕ್ಕೆಂದು ಆ ಮಧ್ಯಮ ಪಾಂಡವನಾದ ತನ್ನ ತಂದೆಯನ್ನೇ ಅವಳಲ್ಲಿಗೆ ಕರೆದೊಯ್ದ ವಿಚಿತ್ರ ಪ್ರಸಂಗ ಮಧ್ಯಮವ್ಯಾಯೋಗದ ವಸ್ತು. ದೂತವಾಕ್ಯದಲ್ಲಿ ಕೃಷ್ಣ ಪಾಂಡವರ ದೂತನಾಗಿ ದರ್ಯೋ ಧನನೊಡನೆ ಸಂಧಾನಕ್ಕೆ ಹೋದುದು ನಿರೂಪಿತವಾಗಿದೆ. ಬ್ರಾಹ್ಮಣವೇಷಧರಿಸಿ ಬಂದ ಇಂದ್ರನಿಗೆ ಅವನ ಬೇಡಿಕೆಯಂತೆ ದಾನವೀರ ಕರ್ಣ ತನ್ನ ಕವಚಕುಂಡಲಗಳನ್ನೇ ದಾನ ಮಾಡಿದ ಪ್ರಕರಣವನ್ನು ಕರ್ಣಭಾರ ಹೃದಯಂಗಮವಾಗಿ ಚಿತ್ರಿಸುತ್ತದೆ. ಘಟೋತ್ಕಚ ಕೃಷ್ಣದೂತನಾಗಿ ಕೌರವರಲ್ಲಿಗೆ ಹೋದ ಸನ್ನಿವೇಶ ದೂತಘಟೋತ್ಕಚದ ವಸ್ತು ಭೀಮ. ದುರ್ಯೋಧನರ ಗದಾಯುದ್ಧದ ಪರಿಣಾಮವಾಗಿ ಸಂಭವಿಸಿದ ದುರ್ಯೋಧನನ ಊರು-ಭಂಗವೇ ವಸ್ತುವಾಗಿ ಉಳ್ಳ ಊರುಭಂಗದಲ್ಲಿ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ದುರ್ಯೋಧನನ ಕರುಣಾಜನಕವಾದ ಮರಣ ರಂಗಮಂಚದ ಮೇಲೆಯೇ ಪ್ರದರ್ಶಿತವಾಗಿದೆ. ಸಂಸ್ಕøತ ನಾಟಕಗಳ ಪೈಕಿ ಇದೊಂದೇ ಶೋಕಾಂತನಾಟಕ.

	ಬಾಲಚರಿತ ಆರು ಅಂಕಗಳಲ್ಲಿ ಕೃಷ್ಣನ ಜನನ ಮತ್ತು ಬಾಲಲೀಲೆಗಳನ್ನು ಪ್ರದರ್ಶನಕ್ಕೆ ಅರ್ಹವಾದ ರೀತಿಯಲ್ಲಿ ನಿರೂಪಿಸುತ್ತದೆ. ಆದರೆ ಅನೇಕ ವಿವರಗಳು ಹರಿವಂಶ, ವಿಷ್ಣುಪುರಾಣ, ಭಾಗವತಗಳಲ್ಲಿರುವುದಕ್ಕಿಂತ ತೀರಭಿನ್ನವಾಗಿವೆ. ಕೃಷ್ಣ ಅರಿಷ್ಟರ ಯುದ್ಧ, ಕಂಸ ಅರಿಷ್ಟರ ಮರಣ ರಂಗದ ಮೇಲೆಯೇ ಪ್ರದರ್ಶಿತವಾಗಿವೆ. ಇದರ ಮೂರನೆಯ ಅಂಕದಲ್ಲಿ ಹಲ್ಲೀಶ ನೃತ್ಯದ ಪ್ರದರ್ಶನವಿದೆ. ನಾಟಕದ ಯಾವ ಭಾಗದಲ್ಲೂ ಗೋಪಿಕಾಸ್ತ್ರೀಯರ ವೃತ್ತಾಂತದ ಸೊಂಕೂ ಇಲ್ಲದಿರುವುದು ಗಮನಾರ್ಹ.										
(ಕೆ.ಕೆ.; ಬಿ.ಆರ್,ಎಂ.; ಎಸ್.ಆರ್.ಎಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ